ಜೋಗರಿಕೆ ಬೇನೆ -
ಮಾನವರಲ್ಲಿ ಕಂಡುಬರುವ ಜೋಗರಿಕೆಯೇ ಪ್ರಧಾನ ಲಕ್ಷಣವಾದ ಹಾಗೂ ಪ್ರಾಣಾಂತಿಕವಾದ ಒಂದು ಸೋಂಕು ರೋಗ (ಸ್ಲೀಪಿಂಗ್ ಸಿಕ್‍ನೆಸ್). ಮಧ್ಯ ಮತ್ತು ಪಶ್ಚಿಮ ಆಫ್ರಿಕಕ್ಕೆ ಸೀಮಿತವಾಗಿ ಆಂತರಿಕವಾಗಿ (ಎನ್‍ಡೆಮಿಕ್) ನೆಲೆಗೊಂಡಿರುವ ಮತ್ತು ಕೆಲವು ವೇಳೆ ಸಾಂಕ್ರಾಂಮಿಕವಾಗಿ ಪರಿಣಮಿಸುವ ಬೇನೆ ಎಂದು 19ನೆಯ ಶತಮಾನದ ಆದಿಭಾಗದಿಂದಲೂ ಗುರುತಿಸಲ್ಪಟ್ಟಿದೆ. ರೋಗ ಸಾಕುಪ್ರಾಣಿಗಳಿಗೆ ತಗಲಿ ಅವು ನಾಶವಾಗುವುದೂ ಉಂಟು. ಈ ಕಾರಣದಿಂದ ಆಫ್ರಿಕಕ್ಕೆ ವಲಸೆಬಂದ ಐರೋಪ್ಯರು ಸಾಗುವಳಿ ಸಾಗಾಣಿಕೆಗಳಿಗೆ ಕುದುರೆಗಳನ್ನು ಸಾಕಲು ಸಾಧ್ಯವಾಗದೆ ಶ್ರಮಕೆಲಸಗಳಿಗೆಲ್ಲ ಮಾನವಬಲವನ್ನೇ ಆಶ್ರಯಿಸಬೇಕಾಯಿತು. ಅಂತೆಯೇ ತಿನ್ನಲು ಮಾಂಸವನ್ನು ಒದಗಿಸುವ ದನ, ಕುರಿ, ಹಂದಿಗಳನ್ನು ಸಾಕಲಾರದೆ ಇವರು ವಿಶೇಷವಾಗಿ ಸಸ್ಯಾಹಾರಿಗಳಾಗಿಯೇ ಇರಬೇಕಾಗಿ ಬಂದು ಅನೇಕರು ಪ್ರೋಟೀನ್ ಕೊರತೆಯಿಂದ ನರಳುವಂತಾಯಿತು. ಇಂಥ ಸ್ಥಿತಿ 1956ರಷ್ಟು ಈಚಿನ ತನಕವೂ ಇತ್ತೆಂಬುದು ಕ್ಷೇತ್ರ ಅಧ್ಯಯನಗಳಿಂದ ವ್ಯಕ್ತಪಟ್ಟಿದೆ.

	ಸೋಂಕಿಗೆ ಕಾರಣ ಟ್ರಿಪ್ಯಾನಸೋಮ ಎಂಬ ಏಕಾಣುಜೀವಿ. ಈ ಜಂತುಗಳು ಸೂಕ್ಷ್ಮ ದರ್ಶಕದಲ್ಲಿ ಮಾತ್ರ ಕಾಣಬರುವ ಸೂಕ್ಷ್ಮಾಣುಗಳು. ಪ್ರೋಟೊಜೋವ ಜಾತಿಗೆ ಮ್ಯಾಸ್ಟಿಗಾಫೋರ ಅಥವಾ ಫ್ಲ್ಯಾಜೆಲೇಟ ವರ್ಗದ ಹೀಮೋಫ್ಲಾಜೆಲೇಟ ಉಪವರ್ಗಕ್ಕೆ ಸೇರಿದವು. ಪೂರ್ಣ ಪರಾವಲಂಬಿ ಜೀವಿಗಳು. ಅತಿಥೇಯನ ರಕ್ತದಲ್ಲಿ ವಾಸ. ತೆಳ್ಳನೆಯ ಲಂಬಾಕೃತಿಕ ಕೇಂದ್ರಬಿಂದುವಿನ ಜೊತೆಗೆ ಒಂದು ಪುಚ್ಛಬಿಂದು: ದೇಹವನ್ನು ಆಕ್ರಮಿಸಿಕೊಂಡಿರುವ ಒಳಕಾಡುವ ಪೊರೆ; ಅದಕ್ಕೆ ಅಂಟಿಕೊಂಡು ಬೀಸಾಗಿರುವ ಚಾಟಿ-ಇವು ಇತರ ವಿಶಿಷ್ಟ ಲಕ್ಷಣಗಳು. ಟ್ರಿ. ಗ್ಯಾಂಬಿಎನ್ಸಿ ಮತ್ತು ಟ್ರಿ. ರ್ಹೋಡೇಸಿಎನ್ಸಿ ಎಂಬ ಪ್ರಭೇದಗಳು ಮಾನವರಲ್ಲಿ ಜೋಗರಿಕೆ ರೋಗವನ್ನು ಉಂಟುಮಾಡುತ್ತವೆ. ಟ್ರಿ. ಬ್ರೂಸಿಯೈ ಎಂಬುದು ಪಶು ಜಿಂಕೆಗಳಲ್ಲಿ ನಗಾನಾ ಎಂಬ ಇಂತವೇ ಮಾರಕ ರೋಗಕ್ಕೆ ಕಾರಣ. ಟ್ರ. ಕ್ರೂಸೈ ಎಂಬುದು ದಕ್ಷಿಣ ಅಮೆರಿಕದಲ್ಲಿರುವ ಪ್ರಭೇದ. ಇದು ಚ್ಯಾಗನವ್ಯಾಧಿ ಎಂಬ ಹೆಸರಿನ ಬೇರೆ ಒಂದು ರೋಗವನ್ನು ಮಾನವರಲ್ಲಿ ಉಂಟುಮಾಡುತ್ತದೆ. ತಿಗಣೆ ಕಡಿತದ ಮೂಲಕ ಮಾನವನಿಂದ ಮಾನವನಿಗೆ ಇದರ ಸೋಂಕು ಹರಡಿ ಜ್ವರ, ಗಳಲೆಕಟ್ಟಿಕೊಳ್ಳುವುದು, ಯಕೃತ್ತು ಪ್ಲೀಹ ಥೈರಾಯಿಡ್ ಗ್ರಂಥಿಗಳ ಗಾತ್ರವೃದ್ಧಿ ಗುಂಡಿಗೆಗೆ ರೋಗಕಾರಕದ ವ್ಯಾಪನ-ಇವು ಉಂಟಾಗಿ 2-4 ವಾರಗಳಲ್ಲಿ ವ್ಯಕ್ತಿ ಮರಣಹೊಂದಬಹುದು. ಇಲ್ಲವೇ ರೋಗ ದೀರ್ಘಕಾಲಿಕವಾಗಿದ್ದು ಮಾರಕವಾಗಬಹುದು. ಪ್ರೈಮಾಕ್ವಿನ್, ಪೆಂಟೋಕ್ವಿನ್ ಮುಂತಾದ ಮದ್ದುಗಳನ್ನು ಚಿಕಿತ್ಸೆಗಾಗಿ ಬಳಸಿ ಚ್ಯಾಗನ ರೋಗದಿಂದ ಪಾರಾಗಬಹುದು.

	ಜೋಗರಿಕೆಬೇನೆಕಾರಕ ಟ್ರಿಪ್ಯಾನಸೋಮಗಳನ್ನು ವ್ಯಕ್ತಿಯಿಂದ ವ್ಯಕ್ತಿಗೆ ಗ್ಲಾಸಿನ ಎಂಬ ನೊಣಗಳು ಒಯ್ದು ಸೋಂಕನ್ನು ಹರಡುತ್ತವೆ. ಇವುಗಳಿಗೆ ಶೇಶೇ ನೊಣಗಳೆಂದೂ ಹೆಸರುಂಟು. ಇವು ಹಗಲುಸಂಚಾರಿಗಳು. ನೀರಿನ ವಸತಿ ಇರುವ ಅರಣ್ಯಪ್ರದೇಶ ಇವುಗಳ ಕ್ಷೇತ್ರ. ಗ್ಲಾ. ಪ್ಯಾಲ್ಟ್ಸ್‍ಲಿಸ್ ಎಂಬುದು ಗ್ಯಾಂಬಿಯಾನದಿ ಪ್ರದೇಶದಲ್ಲಿ ಮತ್ತು ಆಫ್ರಿಕದ ಪಶ್ಚಿಮತೀರದಲ್ಲಿ ಕಂಡುಬರುವ ನೊಣ. ನೆಲದ ಮಟ್ಟದಲ್ಲಿ ಹಾರಾಡುತ್ತಾ ಪಾದ ಮತ್ತು ಕಾಲುಗಳನ್ನು ಕಚ್ಚಿ ರಕ್ತ ಹೀರುವುದು ಇದರ ಕ್ರಮ. ಟ್ರಿ. ಮಾರ್ಸಿಟಾನ್ಸ, ಎಂಬುದು ರ್ಹೋಡೇಸಿಯ ಪ್ರಾಂತ್ಯದಲ್ಲಿ ಕಂಡುಬರುತ್ತದೆ. ಇದು ಹಾರಾಡುವುದು ಗ್ಲಾ. ಷ್ಯಾಲ್ಟ್ಯಾಲಿಸ್‍ಗಿಂತ ಮೇಲಿನ ಮಟ್ಟದಲ್ಲಿ. ಆದ್ದರಿಂದ ಇದು ಕೈ, ತೋಳು, ಕತ್ತುಗಳನ್ನು ಕಚ್ಚಿ ರಕ್ತಹೀರುತ್ತದೆ. ಟ್ರಿ. ರ್ಹೋಡೇಸಿಎನ್ಸಿ ಸೋಂಕು ಹರಡುವುದು ಹೀಗೆ. ಈ ನೊಣಗಳು ಪ್ರಾಣಿಗಳಿಂದ ಮಾನವನಿಗೆ ಸೋಂಕನ್ನು ಹರಡುವುದಿಲ್ಲವೆಂದು ತೋರುತ್ತದೆ ಖಚಿತವಿಲ್ಲ.

	ಟ್ಸೆಟ್ಸೇ ನೊಣ ಮಾನವರೋಗಿಯನ್ನು ಕಡಿದಾಗ ಟ್ರಿಪ್ಯಾನಸೋಮಗಳು ನೊಣದ ದೇಹದ ಒಳಹೋಗುತ್ತವೆ. ಇವು ನೊಣದ ಕರುಳಿನಲ್ಲಿ ಬೆಳೆದು ಸಂಖ್ಯೆಯಲ್ಲಿ ವೃದ್ಧಿಸಿ ಕೊನೆಗೆ ನೊಣದ ಲಾಲಾಗ್ರಂಥಿಗಳನ್ನು ವ್ಯಾಪಿಸುತ್ತವೆ. ಅನಂತರ ನೊಣ ಬೇರೆ ವ್ಯಕ್ತಿಯನ್ನು ಕಡಿದಾಗ ಟ್ರಿಪ್ಯಾನಸೋಮಗಳು ಆ ವ್ಯಕ್ತಿಯ ದೇಹದ ಒಳಹೋಗುತ್ತವೆ. ಶೇಶೇ ನೊಣಗಳ ಕಡಿತದಿಂದ ತಾತ್ಕಾಲಿಕವಾಗಿ ಬಹುನೋವಾದರೂ ಅನಂತರ ಚರ್ಮದಲ್ಲಿ ಕಡಿತದ ಗಾಯ ಅಗಣನೀಯ. ಟ್ರಿಪ್ಯಾನಸೋಮಗಳು ಮಾನವದೇಹವನ್ನು ಹೊಕ್ಕ ಸುಮಾರು 15 ದಿವಸಗಳಾದ ಬಳಿಕ ಜ್ವರ ಬರುತ್ತದೆ. 6-7 ದಿವಸಗಳ ತರುವಾಯ ಜ್ವರ ನಿಂತು ಪುನಃ ಪುನಃ ಮರುಕಳಿಸುತ್ತದೆ. ತೆಲನೋವು, ನಿಶ್ಯಕ್ತಿ, ಮೈಮೇಲೆಲ್ಲಾ ಕೆಂಪು ದದ್ದುಗಳು, ಗಳಲೆಕಟ್ಟಿಕೊಳ್ಳುವುದು. ಊತ, ರಕ್ತಕಣನಾಶ, ಕೃಶವಾಗುವಿಕೆ ಇತ್ಯಾದಿಗಳು ಕಂಡುಬರುವುದು ರೋಗ ಮುಂದುವರಿದ ಸೂಚನೆ. ಕುತ್ತಿಗೆಯ ಪಾಶ್ರ್ವದ ಹಿಂಭಾಗದಲ್ಲಿ ಗಳಲೆಕಟ್ಟಿಕೊಳ್ಳುವುದು ಈ ರೋಗದ ವಿಶೇಷಲಕ್ಷಣವೆಂದು 19ನೆಯ ಶತಮಾನದ ಆದಿಭಾಗದಲ್ಲಿ ಆಫ್ರಿಕದ ಸಂಚಾರಿಯಾಗಿದ್ದ ವಿನ್‍ಟರ್ ಬಾಟಮ್ ಎಂಬಾತ ಮೊದಲಿಗೆ ವಿವರಿಸಿದ. ಈ ಲಕ್ಷಣಕ್ಕೆ ವಿನ್ ಟರ್ ಬಾಟಮ್ಮನ ಚಿಹ್ನೆ ಎಂದೇ ಹೆಸರು. ರೋಗಾಣು ಮಿದುಳಿಗೆ ವ್ಯಾಪಿಸಿ ಆಲಸಿಕೆ, ನಿರಂತರ ಜೋಗರಿಕೆಗಳನ್ನು ಉಂಟುಮಾಡುತ್ತವೆ. ಕೂತಾಗ, ಊಟಮಾಡುವಾಗ ಕೊನೆಗೆ ನಿಂತಂತೆಯೇ ಹಠಾತ್ತಾಗಿ ಜೋಗರಿಕೆ ತಲೆದೋರಬಹುದು. ಕೈ ಕಾಲು ಜಲಮಲಗಳ ಸ್ವಾಧೀನ ತಪ್ಪುವುದು, ಅದಿರುವಾಯು, ಮಂಪರ ಇವು ಮುಂದಿನ ಘಟ್ಟಗಳು. ಕೊನೆಗೆ ಮರಣ. ಈ ಕೊನೆಯ ಘಟ್ಟಗಳು ಟ್ರಿ. ಗ್ಯಾಟಬಿಎನ್ಸಿ ಸೋಂಕಿನಲ್ಲಿ ಬಹುವರ್ಷಗಳಾದ ಮೇಲೆ ಕಾಣಿಸಿಕೊಳ್ಳಬಹುದು. ಟ್ರಿ. ರ್ಹೋಡೇಸಿಎನ್ಸಿ ಸೋಂಕಿನಲ್ಲಿ ಕೇವಲ ಕೆಲವು ತಿಂಗಳುಗಳಲ್ಲಿ ರೋಗ ಉಲ್ಬಣಗೊಳ್ಳುತ್ತದೆ. ಸನ್ನಿ ಮುಚ್ಚಿಕೊಂಡು ಶೀಘ್ರ ಮರಣ ಸಂಭವಿಸುವುದು ಇದರಲ್ಲಿ ಬಹು ಸಾಮಾನ್ಯ. ರೋಗಾವಸ್ಥೆಯಲ್ಲಿ ಟ್ರಿಪ್ಯಾನಸೋಮ ರಕ್ತ ಹಾಗೂ ಮಿದುಳು, ಮಿದುಳುಬಳ್ಳಿಯ ದ್ರವ, ದುಗ್ದರಸಗಳಲ್ಲಿ ಕಂಡುಬರುತ್ತದೆ. ಕೆಲವು ವೇಳೆ ಇವನ್ನು ಪತ್ತೆಮಾಡುವುದು ಬಹು ಕಷ್ಟವಾಗಬಹುದು. ಜೋಗರಿಕೆಯ ಘಟ್ಟ ತಲುಪಿದಂತೆ ಚಿಕಿತ್ಸೆ ಕಷ್ಟವಾಗತ್ತದೆ. ರ್ಹೋಡೇಸಿಎನ್ಸಿ ಸೋಂಕಿನಲ್ಲಂತೂ ರೋಗ ಘಟ್ಟ ಮುಟ್ಟಿತೆಂದರೆ ಅದು ಚಿಕಿತ್ಸಾತೀತವೆಂದೇ ಗಣಿಸಬೇಕು.

	ಚಿಕಿತ್ಸೆಗೆ ಆರ್ಸೆನಿಕ್ ಯುಕ್ತ ಕಾರ್ಬಾನಿಕ ಸಂಯುಕ್ತಗಳನ್ನು (ಆಗ್ರ್ಯಾನಿಕ್ ಆರ್ಸ ನಿಕಲ್ಸ್) ಚುಚ್ಚುಮದ್ದಾಗಿ ಉಪಯೋಗಿಸುತ್ತಾರೆ. ರೋಗದ ತಾರುಣ್ಯದಲ್ಲಿ ಮಿದುಳು ರೋಗಪೀಡಿತವಾಗುವ ಮುಂಚೆ ಮಾಡುವ ಚಿಕಿತ್ಸೆ ಸಾರ್ಥಕ. ಮೊದಲಿಗೆ ಕಾರ್ಬಾರ್ಸೋನ್ ಎಂಬ ಈ ಗುಂಪಿಗೆ ಸೇರಿದ ಮದ್ದನ್ನು ಬಳಸುತ್ತಿದ್ದರು. ಈಚೆಗೆ ಮೆಲಾರ್ಸೋಪ್ರೋಲ್, ಟ್ರೈಮೇಲಾರ್ಸಾನ್ ಮುಂತಾದವನ್ನು ಬಳಸುತ್ತಾರೆ. ಒಂದು ವಾರ ಅಂತರ ಬಿಟ್ಟು ಪುನಃ ಚಿಕಿತ್ಸೆ ಬೇಕಾದೀತು. ವ್ಯಕ್ತಿಚಿಕಿತ್ಸೆಯಲ್ಲದೆ ಸಾರ್ವತ್ರಿಕ ರೋಗ ನಿವಾರಕ ಕ್ರಮಗಳನ್ನೂ ಅನುಸರಿಸಬಹುದು. ಶೇಶೇ ನೊಣಗಳು; ಹಗಲುಜೀವಿಗಳಾದ್ದರಿಂದ ಅವುಗಳ ಕಡಿತದಿಂದ ರಕ್ಷಣೆಪಡಯುವುದು ಕಷ್ಟ. ನೊಣನಾಶಕ ವಿಧಾನಗಳನ್ನು ಅನುಸರಿಸಬಹುದು. ಪೆಂಟಾಮಿಡೀನ್ ಐನೋ ಥೈಯೋನೇಟ್ ಎಂಬ ಔಷಧವನ್ನು ಚುಚ್ಚುಮದ್ದಾಗಿ ತೆಗೆದುಕೊಂಡರೆ ರೋಗದಿಂದ 3-6 ತಿಂಗಳು ರಕ್ಷಣೆ ಪಡೆಯಬಹುದು.

	(ನೋಡಿ- ಕೀಟಗಳು)
	(ನೋಡಿ- ಗ್ಲಾಸಿನ-ನೊಣ)
	(ನೋಡಿ- ಟ್ರಿಪ್ಯಾನಸೋಮ)						(ಎಂ.ಆರ್.ಎಸ್.ಇ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ